ಕೀಲುವಾತ ಜ್ವರ

ಪಟ್ಟಣಗಳಲ್ಲಿ ವಾಸಿಸುವ ಕಡಿಮೆ ಆದಾಯ ಬರುವ ಬಡವರಲ್ಲಿಯೂ ಜನಸಂದಣಿ ಹೆಚ್ಚಾಗಿರುವ, ಅನಾರೋಗ್ಯಕರವಾದ ವಾತಾವರಣದಲ್ಲಿ, ಜೌಗು ಪ್ರದೇಶದ ಗುಡಿಸಲುಗಳಲ್ಲಿ ವಾಸಿಸುವ ಜನಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವ ವ್ಯಾಧಿ. ಒಂದೇ ಮನೆಗೆ ಸೇರಿದ ಮಕ್ಕಳು ಒಂದೇ ವಿಧವಾದ ಸನ್ನಿವೇಶಕ್ಕೆ ಸಿಲುಕುವುದರಿಂದ ಆ ಎಲ್ಲ ಮಕ್ಕಳಿಗೂ ಈ ಕಾಯಿಲೆ ಬರುವ ಅವಕಾಶಗಳು ಹೆಚ್ಚು. ಇದು ಸಾಮಾನ್ಯವಾಗಿ ಶರತ್ಕಾಲ ಮತ್ತು ವಸಂತಕಾಲಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಮಶೀತೋಷ್ಣವಲಯದಲ್ಲಿ ಇದರ ವ್ಯಾಪ್ತಿ ಹೆಚ್ಚು. ಉಷ್ಣವಲಯದಲ್ಲಿ ಬಲು ಕಡಿಮೆ. ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಲ್ಲ. ಸಾಮಾನ್ಯವಾಗಿ ಹೆಂಗಸರಿಗಿಂತ ಗಂಡಸರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 5ರಿಂದ 15 ವರ್ಷದ ವಯಸ್ಸಿನವರಿಗೆ ಬರುವುದು ಹೆಚ್ಚು. 50 ವರ್ಷಕ್ಕಿಂತ ಕಡಿಮೆಯಿರುವವರಿಗೆ ಬರುವ ಹೃದಯದ ರೋಗಗಳಿಗೆ ಕೀಲುವಾತ ಜ್ವರ ಅತ್ಯಂತ ಸಾಮಾನ್ಯವಾದ ಕಾರಣ, ಈ ರೋಗ ಬರುವುದಕ್ಕೆ ಒಂದರಿಂದ ನಾಲ್ಕು ವಾರ ಮುಂಚೆ ಎ ಗುಂಪಿನ ಹೀಮೋಲೈಟಕ್ ಸ್ಟ್ರೆಪ್ಟೋಕಾಕೈ ರೋಗಾಣುವಿನಿಂದ ಸೋಂಕು ತಗುಲಿರುತ್ತದೆ. ಗಂಟಲು ನೋವು, ಮೂಗಿನ ಸೋಂಕು, ಕಿವಿ ಸೋರುವುದು ಇಲ್ಲವೇ ಉಸಿರಾಟದ ಮೇಲು ಸೋಂಕು ತಗುಲಿರಬಹುದು. ಗರ್ಭಿಣಿಯರಿಗೆ ಈ ಕಾಯಿಲೆ ಬರದಿದ್ದರೂ ಇದು ಬಂದವರು ಗರ್ಭಿಣಿಯರಾಗಬಹುದು. ಈ ಕಾಯಿಲೆಗೆ ನಿರ್ಧಿಷ್ಟ ಕಾರಣ ಇನ್ನೂ ತಿಳಿದಿಲ್ಲ.

 ಕೀಲುವಾತ ಜ್ವರ ನಿಧಾನವಾಗಿ ಉಲ್ಬಣಿಸುವ ಒಂದು ರೋಗ. ಇದು ಮಧ್ಯದಲ್ಲಿ ಹಾಗೆಯೇ ಅಳಿಸಿಹೋಗಬಹುದು. ಇಲ್ಲವೆ ಹೆಚ್ಚಾಗಬಹುದು. ಅಪೂರ್ವವಾಗಿ ಇದು ತೀವ್ರವಾಗಿರುತ್ತದೆ. ಈ ಕಾಯಿಲೆ ಬಲಿಯುತ್ತಿದ್ದಂತೆ ಹೃದಯದ ಕವಾಟಗಳಿಗೆ, ಹೃದಯಕ್ಕೆ ತೊಂದರೆಯುಂಟಾಗುತ್ತದೆ.

 ಅತಿ ಹೃತ್ಕ್ರಿಯಾವೇಗ ನಿದ್ರೆಯಲ್ಲಿಯೂ ಇರುತ್ತದೆ. ಜ್ವರ, ವಿಪರೀತ ಮೈ ಬೆವರುವಿಕೆ, ತಲೆನೋವು, ಆಲಸ್ಯ, ಹಸಿವಾಗದಿರುವಿಕೆ, ವಾಕರಿಕೆ ಮತ್ತು ಸುಸ್ತುಗಳಿರುತ್ತವೆ.

 ಕೆಲವರಿಗೆ ಆಗಾಗ್ಗೆ ಮೂಗಿನಿಂದ ರಕ್ತ ಸುರಿಯುತ್ತಿರುತ್ತದೆ. ಕೀಲುಗಳಲ್ಲಿ ನೋವು ಅಭಿವೃದ್ಧಿಯಾಗುತ್ತಿರುತ್ತದೆ. ಇದ್ದಕ್ಕಿದ್ದಂತೆಯೇ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು-ಕೀಲುಗಳು ಊದಿಕೊಳ್ಳುತ್ತವೆ. ಬಿಗಿತುಕೊಳ್ಳುತ್ತವೆ. ಮುಟ್ಟಿದರೆ ನೋಯುತ್ತವೆ. ಮಂಡಿ, ಕಾಲಿನ ಹರಡು, ಭುಜದ ಕೀಲು, ಮಣಿಕಟ್ಟು ಮತ್ತು ಮೊಣಕೈ ಕೀಲುಗಳು ಹೆಚ್ಚಿನ ತೊಂದರೆಗೆ ಸಿಲುಕುತ್ತವೆ. ಎರಡು ಕಡೆಯೂ ಏಕರೀತಿಯಲ್ಲಿರುವುದಿಲ್ಲ. ಈ ಕೀಲುಗಳ ಉರಿಯೂತ ಒಂದು ಕೀಲಿನಿಂದ ಇನ್ನೊಂದು ಕೀಲಿಗೆ ಹರಿಯುತ್ತಿರುತ್ತದೆ. ಮುಂದಿನ ಕೀಲಿನ ನೋವು ಹೆಚ್ಚಾಗುತ್ತಿದ್ದಂತೆ ಹಿಂದೆ ಆಗಿದ್ದ ಕೀಲಿನ ನೋವು ಉತ್ತಮವಾಗುತ್ತಿರುತ್ತದೆ. ಈ ಕೀಲುಗಳ ಉರಿಯೂತ ಒಂದರಿಂದ ಐದು ವಾರಗಳವರೆಗಿರುತ್ತದೆ. ಅನಂತರ ಯಾವ ಅಂಗವಿಕಲತೆಯೂ ಇಲ್ಲದೆ ಕೀಲುಗಳು ವಾಸಿಯಾಗುತ್ತವೆ. ಕೀಲಿನ ನೋವು ಮತ್ತು ಉರಿಯೂತಗಳನ್ನು ಮಕ್ಕಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಕೀಲು ಮೊದಲು ಬಿಸಿಯಾಗುತ್ತದೆ, ಕೆಂಪಾಗುತ್ತದೆ, ಊದಿಕೊಳ್ಳುತ್ತದೆ, ನೋಯುತ್ತಿರುತ್ತದೆ. ಮುಟ್ಟಿದರೆ ನೋವು ಹೆಚ್ಚಾಗುತ್ತದೆ. ಜ್ವರ ಬರುತ್ತದೆ. ದೊಡ್ಡವರಲ್ಲಿ ಒಂದೇ ಕೀಲು ಇಲ್ಲವೇ ಸಣ್ಣ ಕೀಲುಗಳಿಗೆ ತೊಂದರೆಯಾಗಬಹುದು.

 ಕಾಯಿಲೆ ತೀವ್ರವಾಗಿರುವಾಗ ಇದು ಹೃದಯಾವರಣ, ಶ್ವಾಸಕೋಶಾವರಣ, ಹೃದಯ ಮತ್ತು ಶ್ವಾಸಕೋಶಗಳಿಗೆ ತಗಲುತ್ತದೆ. ಸೈನೋವಿಯಲ್ ಕೀಲುಗಳನ್ನು ತೊಂದರೆಗೀಡು ಮಾಡುತ್ತದೆ. ಈ ರೋಗ ಕೀಲುಗಳನ್ನು ನೆಕ್ಕಿ ಹೃದಯವನ್ನು ಕಡಿಯುತ್ತದೆ. 75%-80% ಭಾಗದ ರೋಗಿಗಳಲ್ಲಿ ಮೈಟ್ರಲ್ ಕವಾಟ ತೊಂದರೆಗೀಡಾಗುತ್ತದೆ, 30% ಭಾಗ ಅಯೋರ್ಟಾ ಕವಾಟ, 5%ಕ್ಕಿಂತ ಕಡಿಮೆ ಟ್ರೈಕಸ್‍ಪಿಡ್ ಮತ್ತು ಪಲ್ಮನರಿ ಕವಾಟಗಳು ತೊಂದರೆಗೀಡಾಗುತ್ತವೆ, ವಿಚಿತ್ರಗೊಂಡಿರುತ್ತವೆ. ಈ ಕಾಯಿಲೆಗಳಲ್ಲಿ ಮುಖ್ಯವಾಗಿ ಹೃದಯದ ಉರಿಯೂತ, ಹೃದಯಾವರಣದ ಉರಿಯೂತ, ಹೃದಯ ದೊಡ್ಡದಾಗುವಿಕೆ, ಹೃದಯದ ಸೋಲುಗಳನ್ನು ಕಾಣುತ್ತೇವೆ. ಅಯೋರ್ಟ ಮತ್ತು ಮೈಟ್ರಲ್ ಕವಾಟಗಳು ವಿರೂಪಗೊಳ್ಳುವುದರಿಂದ ಮರ್ಮರ ಧ್ವನಿಗಳು ಕೇಳಿಬರುತ್ತವೆ. ಹೃದಯದ ಬಡಿತದನಾದದಲ್ಲಿ ವ್ಯತ್ಯಾಸವಿರುತ್ತದೆ. ಹೃದಯದ ಬಡಿತದಲ್ಲಿಯೇ ವ್ಯತ್ಯಾಸ ಕಾಣಬಹುದು. ಹೃದಯಕ್ಕೆ ಬಲು ತೊಂದರೆಯುಂಟಾಗಿ ರೋಗಿ ನರಳುತ್ತಾನೆ. ರೋಗಿ ಗತಿಸಲೂಬಹುದು. ಶಸ್ತ್ರಚಿಕಿತ್ಸೆಗೆ ಒಗ್ಗದ ರೋಗಿಗಳು ಚಿಕ್ಕ ವಯಸ್ಸಿನಲ್ಲಿಯೇ ಹೃದಯದ ಸೋಲಿನಿಂದ ಮತ್ತು ರೋಗಾಣುಗಳ ಸೋಂಕಿನಿಂದ ಗತಿಸುತ್ತಾರೆ.

 ಚರ್ಮದಲ್ಲಿ ಕೆಲವು ವೇಳೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮಧ್ಯದಲ್ಲಿ ಏನೂ ಇರದೆ ಉಂಗುರದಂತೆ ಅಂಚಿನಲ್ಲಿ ಕೆಂಪಾಗಿರುತ್ತವೆ. ಇವು ಕೆಲವು ಕಾಲದ ಅನಂತರ ಅಳಿಸಿಹೋಗಬಹುದು. ಇಲ್ಲವೇ ಬಹಳ ದಿವಸಗಳ ವರೆಗೆ ಉಳಿಯಬಹುದು. ಕೆಲವರಿಗೆ ಚರ್ಮದ ಕೆಳಗಡೆ ಸಣ್ಣ ಸಣ್ಣ ಗಂಟುಗಳಾಗಿರುತ್ತವೆ. ಇವನ್ನು ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣುತ್ತೇವೆ. ಕೆಲವರಲ್ಲಿ ಕಡಿಮೆಯಾಗಿಯೂ, ಮತ್ತು ಕೆಲವರಲ್ಲಿ ಹೆಚ್ಚಾಗಿಯೂ ಇರುತ್ತವೆ. ಇವು ಗಟ್ಟಿಯಾಗಿಯೂ ಗಡುಸಾಗಿಯೂ ನೋವಿಲ್ಲದೆಯೂ ಇರುತ್ತವೆ. ಇವು ಅಂಗಾಂಶ ಕೋಶ, ಸ್ನಾಯುರಜ್ಜು, ಕೋಶಗಳಿಗೆ ಹೊಂದಿಕೊಂಡು ಮೂಳೆಗಳು ಎಲ್ಲಿ ಹೆಚ್ಚಾಗಿ ಮೈದೋರುತ್ತವೆಯೋ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಮೊಳಕೈ, ಹಿಂಗೈ, ಕಾಲ್ಗಿಣ್ಣು, ಬೆನ್ನುಮೂಳೆ, ತಲೆಬರುಡೆಯ ಹಿಂಬದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವು ಕಾಣಿಸಿಕೊಂಡು ಅಳಿಸಿಹೋಗಬಹುದು ಇಲ್ಲವೇ ಆಗಾಗ್ಗೆ ಕಾಣಿಸಿಕೊಳ್ಳಬಹುದು.

 ಕಂಪವಾತ ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳಬಹುದು. ಈ ರೋಗ ಬಂದವರಲ್ಲಿ 50%ರಷ್ಟು ಜನರಿಗೆ ಕೀಲುವಾತ ಜ್ವರದ ಇತರ ಲಕ್ಷಣಗಳಿರುತ್ತವೆ. ಹುಡುಗಿಯರಿಗೆ ಹೆಚ್ಚಾಗಿ ಈ ರೋಗ ತಗಲುತ್ತದೆ. ಬುದ್ಧಿವಂತ ಮಕ್ಕಳಲ್ಲಿ ಈ ರೋಗವನ್ನು ಹೆಚ್ಚಾಗಿ ಕಾಣಬಹುದು. ನಿದ್ರೆ ಮಾಡುವಾಗ ಅನೈಚ್ಛಿಕ ಚಲನೆ ನಿಂತು ಹೋಗುತ್ತದೆ. ದೊಡ್ಡವರಲ್ಲಿ ಈ ರೋಗ ಸಾಮಾನ್ಯವಾಗಿ ಕಾಣುವುದಿಲ್ಲ, ನಾಲಗೆ, ಕೈ, ತೋಳುಗಳು, ಬೆರಳುಗಳು, ಕಾಲುಗಳು ಅನೈಚ್ಛಿಕವಾಗಿ ಚಲಿಸುತ್ತಿರುತ್ತವೆ. ಈ ರೀತಿಯ ಅನೈಚ್ಛಿಕ ಚಲನೆಯುಂಟಾದವರಲ್ಲಿ ಕೀಲುಗಳ ಉರಿಯೂತವಿಲ್ಲದೆ ಇರಬಹುದು.

 ಈ ರೋಗಿಗಳಲ್ಲಿ ಬಿಳಿರಕ್ತ ಕಣಗಳು ಹೆಚ್ಚಾಗುತ್ತವೆ. ರಕ್ತ ಶೀಘ್ರವಾಗಿಯೂ ವೇಗವಾಗಿಯೂ ಮಡ್ಡಿಗಟ್ಟುತ್ತದೆ. ರಕ್ತಹೀನತೆಯುಂಟಾಗುತ್ತದೆ. ರಕ್ತದಲ್ಲಿ ಅನೇಕ ಬದಲಾವಣೆಗಳುಂಟಾಗುತ್ತವೆ. ಮೂತ್ರದಲ್ಲಿ ಆಲ್ಬ್ಯುಮಿನ್ ಮತ್ತು ರಕ್ತ ಕಣಗಳು ಹೋಗಬಹುದು. 5% ರೋಗಿಗಳಲ್ಲಿ ಗಂಟಲಿನಿಂದ ತೆಗೆದು ವಸ್ತುವಿನಿಂದ ಬೀರಿ ಹೀಮೋಲೈಟೆಕ್ ಸ್ಟ್ರೆಪ್ರೋಕಾಕೈಗಳನ್ನು ಬೆಳೆಸಿ ಬೇರ್ಪಡಿಸಬಹುದು.

 ದುಷ್ಟರಿಣಾಮಗಳು : ಹೃದಯ ದುರ್ಬಲಗೊಳ್ಳುವುದು, ಹೃದಯದ ಸೋಲು, ಹೃದಯ ನಿಯಮವಿಲ್ಲದೆ ಬಡಿಯುವುದು, ಹೃದಯಾವರಣದ ಉರಿಯೂತ, ಹೃದಯಾವರಣದೊಳಗೆ ನೀರು ಸೇರುವುದು, ಶ್ವಾಸಕೋಶಗಳ ಉರಿಯೂತ, ರಕ್ತದ ಗಡ್ಡೆಗಳು ಶ್ವಾಸಕೋಶವನ್ನು ಸೇರುವುದು, ಮಿದುಳಿಗೆ ರಕ್ತದ ಗಡ್ಡೆಗಳು ಹೋಗಿ ರೋಗಿಗೆ ಲಕ್ವ ಹೊಡೆಯುವುದು, ಶ್ವಾಸಕೋಶಗಳಲ್ಲಿ ನೀರು ತುಂಬುವುದು ಇತ್ಯಾದಿಗಳನ್ನು ಈ ರೋಗಿಗಳಲ್ಲಿ ಕಾಣಬಹುದು. ಪುನಃ ಕಾಯಿಲೆ ಬರುವುದನ್ನು ತಡೆಗಟ್ಟದೆ ಹೋದರೆ ಪ್ರತಿಸಾರಿಯೂ ಹೃದಯಕ್ಕೆ ಗಾಸಿ ಹೆಚ್ಚಾಗುವುದು. 

 (ಎ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ